Karnataka

ಐದು ಲಕ್ಷ ಮುಂಗಡ ಕೊಡದೇ ದಾಖಲಿಸಿಕೊಳ್ಳಲು ಒಪ್ಪದ ಅನಾಗರಿಕ ವರ್ತನೆ

ಅವಧಿಪೂರ್ಣ ಜನಿಸಿದ ಶಿಶುವಿಗೆ ಐಸಿಯು ವ್ಯವಸ್ಥೆ ನೀಡದೇ ನಗರದ ಸೇಂಟ್ಸ್ ಜಾನ್ಸ್ ಆಸ್ಪತ್ರೆ ಸಿಬ್ಬಂದಿ ಸತಾಯಿಸಿದ್ದಾರೆ. ಎಚ್‌ಎಸ್‌ಆರ್ ಲೇಔಟ್‌ನ ಗ್ರೀನ್ ವಿವ್ ಆಸ್ಪತ್ರೆಯಲ್ಲಿ ಲಾವಣ್ಯ ಎಂಬುವವರಿಗೆ ಜನಿಸಿದ ಶಿಶುವಿಗೆ ತುರ್ತು ಚಿಕಿತ್ಸೆ ಅಗತ್ಯವಿತ್ತು. ಅಲ್ಲಿ ಐಸಿಯು ಇಲ್ಲದ ಕಾರಣ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ರವಾನಿಸಿದ್ದಾರೆ. ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ಸ್ಥಳಾವಕಾಶದ ಕೊರತೆಯಿಂದ ಸೇಂಟ್ ಜಾನ್ಸ್‌ಗೆ ತೆರಳಲು ತಿಳಿಸಿದ್ದಾರೆ.

ಸೇಂಟ್ ಜಾನ್ಸ್‌ನಲ್ಲಿ ಹಾಸಿಗೆ ಖಾಲಿಯಿದ್ದರೂ ಮುಂಗಡವಾಗಿ ಐದು ಲಕ್ಷ ರುಪಾಯಿ ಹಣ ನೀಡದಿದ್ದರೆ, ಐಸಿಯುಗೆ ದಾಖಲಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಹೀಗಾಗಿ ಸುಮಾರು ಮೂರು ಗಂಟೆ ತಾಯಿ ಮತ್ತು ಶಿಶುವನ್ನು ಆಂಬ್ಯುಲೆನ್ಸ್‌ನಲ್ಲೇ ಕಾಯಿಸಿದ್ದಾರೆ.

ಸಂಬಂಧಿಕರು ಹಣದ ವ್ಯವಸ್ಥೆ ಮಾಡುತ್ತೇವೆ, ಮೊದಲು ತಾಯಿ, ಶಿಶುವನ್ನು ದಾಖಲಿಸಿಕೊಳ್ಳಿ ಎಂದು ಮನವಿ ಮಾಡಿದರೂ, ಹಣ ನೀಡದ ಹೊರತು ಆಸ್ಪತ್ರೆಗೆ ಸೇರಿಸುವುದಿಲ್ಲಎಂದು ಹೇಳಿ ಅಮಾನವೀಯವಾಗಿ ನಡೆದು­ಕೊಂಡಿದ್ದಾರೆ. ಸುದ್ದಿವಾಹಿನಿಗಳಲ್ಲಿ ಈ ವರದಿ ಪ್ರಸಾರ­ವಾಗುತ್ತಿದ್ದಂತೆ, ಆರೋಗ್ಯ ಸಚಿವ ಯು.ಟಿ. ಖಾದರ್ ಇಂದಿರಾಗಾಂಧಿ ಆಸ್ಪತ್ರೆಗೆ ಕರೆ ಮಾಡಿ ಶಿಶುವಿಗೆ ವೆಂಟಿಲೇಟರ್ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಬಳಿಕ ಇಂದಿರಾಗಾಂಧಿ ಆಸ್ಪತ್ರೆಯ ಐಸಿಯುಗೆ ತಾಯಿ, ಶಿಶುವನ್ನು ದಾಖಲು ಮಾಡಲಾಯಿತು.

ಇದು ಮೊದಲೇನಲ್ಲ

ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಈ ಹಿಂದೆ ವೆಂಟಿಲೇಟರ್ ಸಮಸ್ಯೆಯಿಂದಾಗಿ ಹಲವು ಮಕ್ಕಳು ಅಸ್ವಸ್ಥಗೊಂಡಿದ್ದರು. ಆಗ ಆಸ್ಪತ್ರೆಯ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ್ದ ಸಚಿವ ಖಾದರ್, ಸರಕಾರಿ ಆಸ್ಪತ್ರೆಗಳ ಐಸಿಯು ಸಮಸ್ಯೆ ಪರಿಹರಿಸಲಾಗುವುದು ಎಂದು ಹೇಳಿದ್ದರು. ಆದರೆ ಸರಕಾರಿ ಆಸ್ಪತ್ರೆಗಳಲ್ಲಿ ಹೆಚ್ಚು ಜನ ಚಿಕಿತ್ಸೆ ಪಡೆಯುವ ಕಾರಣ ಕೆಲವೊಮ್ಮೆ ಹಾಸಿಗೆಗಳ ಕೊರತೆ ಉಂಟಾಗುತ್ತದೆ. ಆಗ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿದರೆ, ಅವರು ಜನರಿಂದ ಹಣ ಸುಲಿಗೆ ಮಾಡುತ್ತಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಬೆಂಗಳೂರಿನ ಹಲವು ಖಾಸಗಿ ಆಸ್ಪತ್ರೆಗಳು ಈ ಹಿಂದೆಯೂ ಇದೇ ರೀತಿ ರೋಗಿಗಳನ್ನು ಸತಾಯಿಸಿರುವ ಉದಾಹರಣೆಗಳಿವೆ. ಹೀಗಾಗಿ ಸರಕಾರ ಇಂತಹ ಖಾಸಗಿ ಆಸ್ಪತ್ರೆಗಳಿಗೆ ಕಠಿಣ ಎಚ್ಚರಿಕೆ ನೀಡದಿದ್ದರೆ ಪರಿಸ್ಥಿತಿ ಬದಲಾಯಿಸುವುದು ಅಸಾಧ್ಯವಾಗಲಿದೆ.

ಶಿಶುವಿನ ಜೀವ ಉಳಿಸುವಂತೆ ಸೇಂಟ್ಸ್ ಜಾನ್ಸ್ ವೈದ್ಯರನ್ನು ಬೇಡಿಕೊಂಡರೂ, ಹಣ ನೀಡದ ಹೊರತು ಯಾವುದೇ ಕಾರಣಕ್ಕೂ ಹಾಸಿಗೆ ನೀಡುವುದಿಲ್ಲ ಎಂದರು. ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಮೊದಲಿಗೆ ಹಾಸಿಗೆ ಖಾಲಿಯಿಲ್ಲ ಎಂದು ಹೇಳಿ, ನಂತರ ಸಚಿವರು ಕರೆ ಮಾಡಿದ ಬಳಿಕ ಹಾಸಿಗೆ ವ್ಯವಸ್ಥೆ ಮಾಡಿದ್ದಾರೆ. ಈಗಲೂ ಶಿಶುವಿನ ಪರಿಸ್ಥಿತಿ ಚಿಂತಜನಕವಾಗಿದ್ದು, ಎರಡು ದಿನ ಏನೂ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

– ಸೆಲ್ವರಾಜ್, ಶಿಶುವಿನ ತಂದೆ



Comments

comments

Click to comment

Leave a Reply

Most Popular

To Top