Travel Nirvana

ಅದು ನಿಜವಾಗಿಯೂ ಹಾಲಿನ ಸಾಗರವೇ…!

’ವಡಾಪಾವ್ ವಡಾ ಪವಾ ಗರ್‌ಮಾ ಗರಮ್ ವಡಾಪಾವ್’ ಎಂಬ ಪಾವ್‌ವಾಲಾ ಕೂಗು ಕಿವಿಗಪ್ಪಳಿಸಿ ಒಮ್ಮೆಲೇ ಎಚ್ಚರವಾಯಿತು. ಎಲ್ಲಿದ್ದೇನೇ ಎಂದು ತಿಳಿಯಲಿಲ್ಲ. ಸುತ್ತ ಒಮ್ಮೆ ಕಣ್ಣಾಡಿಸಿದಾಗ ಕಂಡದ್ದು, ಎದುರಿಗೆ ಖಾಲಿ ಇರುವ ಸೀಟುಗಳು. ಪಕ್ಕದ ಕಿಟಕಿಯಿಂದಾಚೆಗಿನ ಲೋಂಡ ಜಂಕ್ಷನ್ ಎಂದು ಮೂರು ಭಾಷೆಯಲ್ಲಿ ಬರೆದಿದ್ದ ಬೋರ್ಡ್. ಆಗ ವಾಸ್ತವ ಸ್ಥಿತಿ ತಿಳಿಯಿತು ನಾನಿರುವುದು ವಾಸ್ಕೋ-ಡಿ-ಗಾಮ ಎಕ್ಸಪ್ರೆಸ್ ರೈಲಿನಲ್ಲಿ. ನಿನ್ನೆ ತಡರಾತ್ರಿ ದೂದ್‌ಸಾಗರ್ ನೋಡಲೆಂದು ಸ್ನೇಹಿತರೆಲ್ಲಾ ಹೋರೆಟಿದ್ದೆವು ಎಂದು.
ಹಳಯ ಸ್ನೇಹಿತರೆಲ್ಲಾ ಸೇರಿ ಜೀವನದಲ್ಲಿ ಒಮ್ಮೆ ದೂದ್‌ಸಾಗರ್ ಫಾಲ್ಸ್‌ಗೆ ಹೋಗಬೇಕೆಂದು ಬಹಳ ದಿನದ ಆಸೆಯಾಗಿತ್ತು. ಕಾರಣ ಕನ್ನಡದ ಮೈನಾ ಹಾಗೂ ಹಿಂದಿಯ ಚೆನ್ನೈ ಎಕ್ಸಪ್ರಸ್ ಸಿನಿಮಾಗಳಲ್ಲಿ ತೋರಿಸುವ ಫಾಲ್ಸ್‌ನ ದೃಶ್ಯಗಳು ನಮ್ಮ ಮೇಲೆ ಪ್ರಭಾವ ಬೀರಿದ್ದವು. ಅಂತೂ ಕಾಲ ಕೂಡಿಬಂದು ಹರಟೆವು. ಸ್ನೇಹಿತರ ಗುಂಪಲ್ಲಿ ಎಲ್ಲರೂ ಫಾಲ್ಸ್‌ಗೆ ಹೊಸಬರೆ, ನನಗಬ್ಬನಿಗೆ ಎರಡು ಬಾರಿ ಬಂದ ಅನುಭವವಿತ್ತು, ಆಗಾಗಿಯೇ ಎಲ್ಲರ ಪಾಲಿಗೂ ನಾನು ಅನುಭವಸ್ಥ, ನಮ್ಮ ಟೂರ್ ಗೈಡ್ ಎಂದೂ ದಾರಿಯುದ್ದಕ್ಕೂ ಕಾಡಿದುಂಟು ಅದು ಎಷ್ಟರ ಮಟ್ಟಿಗೆ ಎಂದರೆ, ಒಬ್ಬ ಸಾರ್.. ಇಲ್ಲಿ ಟಾಯ್ಲಟ್ ಎಲ್ಲಿದೆ ನನಗೆ ಕರೆದುಕೊಂಡೊಗಿ ದಾರಿಗೊತ್ತಿಲ್ಲ ಎಂದಿದ್ದ. ಮತ್ತೊಬ್ಬ ಪ್ರತಿ ಸ್ಟೆಷನ್‌ಗೂ ಇದು ಯಾವ ಊರು ಮುಂದೆ ಬರುವುದ್ಯಾವೂರು? ಇನ್ನು ಎಷ್ಟು ದೂರ ಇದೆ ಎನ್ನುತ್ತಿದ್ದ, ಮತ್ತೊಬ್ಬ ಯಾಕೆ ಟ್ರೈನ್ ಇಷ್ಟು ನಿಧಾನ ಹೋಗುತ್ತಿದೆ? ಆ ಕೆಂಪು ಚೈನ್ ಏಳಿಯಲೇ ಫಾಸ್ಟ್ ಆಗಿ ಹೋಗಬಹುದು! ಎಂದೆಲ್ಲಾ ಕೇಳುತ್ತಾ ಕಪಿಗಳಂತಾಡುತ್ತಿದ್ದರು. ಇವರುಗಳ ಕಾಟಕ್ಕೆ ಬೇಸತ್ತು ನಾ ಬೇರೆ ಸೀಟಿಗೋಗಿ ಮಲಗಿಕೊಂಡಿದ್ದೆ.

ಲೋಂಡಾದಲ್ಲಿ ಎದ್ದ ಮೇಲೆ ಆ ಕಪಿಗಳನ್ನ ಹುಡುಕಲು ಮುಂದಾದೆ, ಅವರ ಸೀಟ್‌ಗಳು ಖಾಲಿ ಇದ್ದಿದ್ದರಿಂದ ಗಾಬರಿಯಾಗಿ ಟ್ರೈನ್ ಇಳಿದು ನೋಡಿದರೆ ಪಕ್ಕದ ರೈಲ್ವೆ ಕ್ಯಾಂಟೀನ್‌ನ ತಿಂಡಿ ದ್ವಂಸ ಮಾಡುವ ಕಾಯಕದಲ್ಲಿದ್ದರು ಮತ್ತೆ ಅಲ್ಲೋದರೆ ಕಾಡುತ್ತಾರೆಂದು ನಿತ್ಯ ಚಟುವಟಿಕೆಗಳನ್ನ ಮುಗಿಸಿಕೊಂಡು ಬಂದು ಸೀಟಿನಲ್ಲಿ ಕೂಳಿತೆ.

dudhsagar_tunnel_between
ರೈಲು ಮುಂದೆಸಾಗಿ ಕ್ಯಾಸರ್‌ಲಾಕ್ ತಲುಪಿತು. ಇಲ್ಲಿಂದ ಫಾಲ್ಸ್ ೧೧ ಕಿ.ಮೀ ದೂರ. ಟ್ರಕ್ಕಿಂಗ್ ಹೋಗುವವರು ಹೊರಟರು, ನಮ್ಮದೇನು ಟ್ರಕ್ಕಿಂಗ್ ಮಾಡುವ ಪ್ಲಾನ್ ಇರಲಿಲ್ಲ. ಆಗಾಗಿ ಕೆಲ ಸೀಟ್‌ಗಳು ಖಾಲಿಯಾಗಿದ್ದರಿಂದ ಆರಾಮಾಗಿ ಕುಳಿತೆವು. ಇಲ್ಲಿಂದ ಮುಂದಿನ ದಾರಿ ಆಂಬೋನಿ ಘಾಟ್‌ನ ನಿಸರ್ಗದ ಮಡಿಲಲ್ಲಿ. ಅಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಕಾನನ, ಎಷ್ಟು ದೂರಕ್ಕೆ ಕಣ್ಣಾಯಿಸಿದರೂ ಕಾಣುವ ಗಿಡ-ಮರಗಳು, ರೈಲು ಸಾಗುವ ದಿಕ್ಕಿನ ಬಲಭಾಗಕ್ಕೆ ಗಗನದೆತ್ತರಕ್ಕೇರಿರುವ ಬೆಟ್ಟಗಳ ಸಾಲು, ಎಡಭಾಗಕ್ಕೆ ಆಳವಾದ ಪ್ರಪಾತ. ಬ್ಯಾಗಿನಲ್ಲಿದ್ದ ಕ್ಯಾಮರಾ ಜೇಬಲ್ಲಿದ್ದ ಮೊಬೈಲ್‌ಗಳ ಕೆಲಸ ಇಲ್ಲಿಂದ ಆರಂಭವಾಯಿತು, ಆ ಸೊಬಗಿನ ಎಷ್ಟು ಫೋಟೊ ಕ್ಲಿಕ್ಕಿಸಿದರೂ ಸಮಾಧಾನವಾಗುತ್ತಿರಲಿಲ್ಲ. ಘಾಟ್ ಆದ್ದರಿಂದ ರೈಲು ಇಲ್ಲಿ ಆಮೆಗತಿ ವೇಗದಲ್ಲಿ ಸಾಗುತ್ತದೆ. ಮಧ್ಯೆ-ಮಧ್ಯೆ ಬ್ರಿಟಷರ ಕಾಲದಲ್ಲಿ ನಿರ್ಮಿಸಿದ ಕಿಲೋಮೀಟರಗಳಷ್ಟು ಉದ್ದದ ೧೧ ಗುಹೆಗಳು ಬರುತ್ತವೆ. ಗುಹೆಗಳಲ್ಲಿ ರೈಲು ಚಲಿಸುವಾಗ ನಿಮಿಷಗಳ ಮಟ್ಟಿಗೆ ಸಂಪೂರ್ಣ ಕತ್ತಲಾವರಿಸಿ ರಾತ್ರಿಯೆಂಬಂತೆ ಭಾಸವಾಗುತ್ತದೆ. ಇದರೊಟ್ಟಿಗೆ ಒಂದಿಷ್ಟು ಚಿಕ್ಕ ಚಿಕ್ಕ ಝರಿಗಳು ಪಕ್ಕದಲ್ಲೇ ಹರಿಯುತಿದ್ದು ಕಿಟಕಿಯಂದ ಕೈಚಾಚಿದರೆ ಸಿಗುತ್ತವೆ.

doodh-sagar

ಇತ್ತ ಫಾಲ್ಸ್ ಹತ್ತಿರ ಬರುತ್ತಿದ್ದಂತೆ ನೀರಿನ ಭೋರ್ಗರೆತ ಕೇಳಿಸುತ್ತದೆ. ಈ ಶಬ್ದ ಇಳಿಯಲು ಸಿದ್ದರಾಗಿ ಎಂಬ ಅಲಾಮ್ ಇದ್ದಂತೆ. ಇನ್ನೊಂದು ಗುಹೆ ಬಾಕಿಯಿರುವಂತೆ ಚಿಕ್ಕದೊಂದು ತಾತ್ಕಲಿಕ ನಿಲ್ದಾಣದಲ್ಲಿ ರೈಲು ನಿಂತಿತು. ಎಲ್ಲರೂ ಇಳಿದು ಪಕ್ಕದಲ್ಲಿ ದಾರಿ ಇಲ್ಲದ್ದರಿಂದ ರೈಲು ಹೋಗುವವರೆಗು ಕಾಯಬೇಕಿತ್ತು, ಆಗ ದೂದ್ ಸಾಗರ ನೋಡಲು ಬಂದಿದ್ದ ಸುತ್ತಮುತ್ತಲಿನ ೩ ರಾಜ್ಯದವರಲ್ಲದೆ ವಿದೇಶಿ ಜನ ಸಾಗರ ಕಂಡು ಬೆರಗಾದೆವು. ರೈಲಿನಲ್ಲಿ ಕುಳಿತು ಅಂಗಾಂಗ ಮರಗಟ್ಟಿದ್ದರಿಂದ ಉಳಿದಿದ್ದ ಒಂದು ಗುಹೆ ಉದ್ದ ಅಂದಾಜಿಸದೆ ಎಲ್ಲರು ಆಕ್ರೋಶದಲ್ಲಿ ಓಡಿ ಒಳನುಗ್ಗಿದೆವು, ಮುಂದೆ ಹೋದಂತೆ ಕತ್ತಲಾವರಿಸಿ ಕೆಲವರು ಕಿರುಚಾಡತೊಡಗಿದರು ಆಗ ಕೈಲಿದ್ದ ಮೊಬೈಲ್‌ಗಳು ಅಕ್ಷರಶಹಃ ದಾರಿದೀಪವಾದವು.
ಫಾಲ್ಸ್‌ಹತ್ತಿರ ಬಂದಂತೆ ಕುತೂಹಲ ಹೆಚ್ಚುತಿತ್ತು. ಮುಂದೆಸಾಗಿ ಅದರ ಎದುರು ನಿಂತೆವು ಮೈ ರೋಮಾಂಚನ! ಅದು ನಿಜವಾಗಿಯೂ ಹಾಲಿನ ಸಾಗರವೇ! ಯಾರೋ ಮೇಲಿಂದ ಲಕ್ಷಕೋಟಿ ಲೀಟರ್‌ನಷ್ಟು ಹಾಲನ್ನು ಸುರಿಯುತ್ತಿದ್ದಾರೆಂಬ ಭಾವ ಮೂಡಿ ಇಷ್ಟೂ ಹಾಲು ವ್ಯರ್ಥವಾಗುತ್ತಿದೆಯಲ್ಲಪ್ಪಾ! ಎಂಬ ಬೇಸರ ಸುಳಿದಿದ್ದುಂಟು. ಮಾಂಡೋವಿ ನದಿಯು ೧೦೧೭ ಅಡಿ ಎತ್ತರದಿಂದ ಧುಮ್ಮಿಕ್ಕಿ ಹರಿಯುತ್ತಿದ್ದು ಆ ನೀರು ಬಂಡೆಗೆ ಸಿಡಿದು ಸೋನೆ ಮಳೆಯ ಹನಿ ಸಿಂಚನವಾಗುತ್ತಿತ್ತು.


ಇಲ್ಲಿ ಒಮ್ಮೆಲೇ ಮಳೆ ಬರುತಿತ್ತು, ತುಸು ನೀರೆರದು ಕಣ್ಮರೆಯಾಗುತಿತ್ತು. ನೂರಾರು ಫೋಟೊ ಕ್ಲಿಕಿಸಿ ಕ್ಯಾಮರಾ ಮತ್ತು ಮೊಬೈಲ್‌ಗಳ ಮೆಮೋರಿಯ ಜಾಗ, ಬ್ಯಾಟರಿಯ ಶಕ್ತಿ ಖಾಲಿಮಾಡುತ್ತಾ ರೈಲ್ವೆಟ್ರ್ಯಾಕ್‌ಯಿಡಿದು ಮುನ್ನಡೆದೆವು. ದಾರಿಯಲ್ಲಿ ಸಿಕ್ಕ ಚಿಕ್ಕ ಝರಿಗಳಲ್ಲಿ ಶವರ್‌ಬಾಥ್ ಮಾಡುತ್ತಾ ಮಜಾಮಾಡಿದೆವು. ೨ ಕಿ.ಮೀ ದೂರದಿಂದ ಫಾಲ್ಸ್‌ನ ಆಪೋಜಿಟ್ ವೀವ್ ನೋಡಿ, ಅಲ್ಲಿಯೇ ಊರಿಂದ ತಂದಿದ್ದ ಕುರುಕಲು ತಿಂಡಿ ಖಾಲಿ ಮಾಡಿಕೊಂಡು ಫಾಲ್ಸ್‌ನ ಬಳಿಗೆ ಹಿಂದಿರುಗಿದೆವು.
ಅಷ್ಟರಲ್ಲಾಗಲೇ ಸಮಯ ೪ ಗಂಟೆಯಾಗಿತ್ತು, ಅಲ್ಲಿಂದ ಹೊರಡಲು ಕೊನೆಯ ಟ್ರೈನ್ ೫ ಗಂಟೆಯಾಗಿದ್ದರಿಂದ ಜನಸಾಗರ ಹಿಂದಿರುಗುತ್ತಿತ್ತು. ಇಷ್ಟವಿಲ್ಲದಿದ್ದರೂ ಕೊನೆಯ ಬಾರಿ ಜಲಪಾತವನ್ನು ಕಣ್ತುಂಬಿಕೊಂಡು ಒಲ್ಲದ ಮನಸ್ಸಿನಿಂದ  ಹಳಿ ಹಿಡಿದು ನಿಲ್ದಾಣದೆಡೆಗೆ ಸಾಗಿದೆವು. ಸಾಕಷ್ಟು ಮೋಜು ಮಸ್ತಿಯೊಂದಿಗೆ ದಾರಿಯುದ್ದಕ್ಕೂ ನಿಸರ್ಗ ಸವಿಯುಂಡು ಅಂತಿಮವಾಗಿ ಫಾಲ್ಸ್‌ಗೆ ಗುಡ್ ಬೈ ಹೇಳಿ, ಬಂದ ಹೌರತ್‌ನಿಜಾಮುದ್ದೀನನ ಸಹಾಯದಿಂದ ರಾಣಿ ಚನ್ನಮ್ಮನನ್ನು ಹಿಡಿದು ಊರು ಸೇರಿಕೊಂಡೆವು.

– ಜಯಪ್ರಕಾಶ್ ಬಿರಾದಾರ್ , ಪತ್ರಿಕೋದ್ಯಮ ವಿಭಾಗ, ದಾವಿವಿ

Amazon Big Indian Festival
Amazon Big Indian Festival

Copyright © 2016 TheNewsism

To Top