News

ಆತಿರಪಿಳ್ಳಿಯ ಆಕರ್ಷಣೆ

ಮಳೆಗಾಲದ ಪ್ರವಾಸವೆಂದರೇ ಜಲಪಾತಗಳನ್ನು ನೋಡಲು ಎಂಬುದು ಎಲ್ಲರಿಗೂ ಗೊತ್ತು. ಆದರೆ ಈ ಸಮಯದಲ್ಲಿ ಜಲಪಾತಗಳು ಭೋರ್ಗರೆಯುತ್ತಿರುತ್ತವೆ. ಹಾಗಾಗಿ ಜಲಪಾತಗಳೆಂದರೆ ಆಕರ್ಷಣೆ. `ದೇವರ ಸ್ವಂತ ನಾಡು’ ಕೇರಳ ಪ್ರವಾಸೋದ್ಯಮವನ್ನು ಬಹುತೇಕ ನೆಚ್ಚಿಕೊಂಡಿದೆ. ಪ್ರವಾಸೋದ್ಯಮದ ಜಾಲತಾಣಗಳಲ್ಲಿ ಕಾಣಸಿಗುವ ಜಲಪಾತ `ಆತಿರಪಿಳ್ಳಿ’ ಅಥವಾ `ಆತಿರಪಳ್ಳಿ’ ಪ್ರಮುಖವಾದುದು!

ಜೋಗ್ ಜಲಪಾತಕ್ಕೆ ಹೋಲಿಸಿದರೆ ಈ ಜಲಪಾತ ಏನೇನೂ ಅಲ್ಲ- ಆದರೂ ಕೇರಳದ ಪ್ರವಾಸೋದ್ಯಮ ಇಲಾಖೆ ಇದನ್ನು `ಪ್ರೊಮೋಟ್’ ಮಾಡುವ ರೀತಿ ನೋಡಿದರೆ ಜೋಗ್ ಜಲಪಾತದ ಬಳಿ ಅಂತರರಾಷ್ಟ್ರೀಯ ಮಟ್ಟದ ರೆಸಾರ್ಟ್‍ಗಳಿರಬೇಕಿತ್ತು! ಅಷ್ಟೊಂದು ವೈಭವದ ಪ್ರಚಾರ `ಆತಿರಪಿಳ್ಳಿ’ ಜಲಪಾತಕ್ಕೆ ನೀಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ಪರಿಸರದಲ್ಲಿ ಜಲವಿದ್ಯುತ್ ಯೋಜನೆಯೊಂದು ವಿವಾದಕ್ಕೆ ಈಡಾಗಿದ್ದು, ಪರಿಸರವಾದಿಗಳ ವಿರೋಧಕ್ಕೆ ತುತ್ತಾಗಿದೆ.

ತ್ರಿಶೂರ್ ಜಿಲ್ಲೆಯ ಚಾಲಕ್ಕುಡಿ ಪಟ್ಟಣದಿಂದ 30 ಕಿ. ಮೀ. ದೂರದಲ್ಲಿದೆ ಈ ಜಲಪಾತ. ಚಾಲಕ್ಕುಡಿಯಿಂದ ಆತಿರಪಿಳ್ಳಿಯ ಕಡೆಗೆ ಸಾಗುವ ರಸ್ತೆ ಬಳುಕುತ್ತ ಸಾಗುತ್ತದೆ. ರಸ್ತೆಯ ಇಕ್ಕೆಲಗಳಲ್ಲಿ ಕಣ್ಣು ಹಾಯಿಸಿದರೆ ತೆಂಗು, ಅಡಿಕೆ, ರಬ್ಬರ್, ಜಾಯಿಕಾಯಿ, ಅನಾನಸ್, ಎಣ್ಣೆತಾಳೆ ಮುಂತಾದವುಗಳ ತೋಟಗಳು ಗಮನ ಸೆಳೆಯುತ್ತವೆ. ಕೊಚ್ಚಿ ಕ್ರಿಶ್ಚಿಯನ್ ಮತಾವಲಂಬಿಗಳ ಹಲವಾರು ಚರ್ಚುಗಳೂ ಈ ದಾರಿಯ ಬದಿಯಲ್ಲಿವೆ. ಗುಡ್ಡಬೆಟ್ಟಗಳ ಒಂದಿಂಚನ್ನೂ ಬಿಡದೆ ಕೃಷಿ ಮಾಡುವ ಕೇರಳಿಗರ ಕೌಶಲ್ಯ ಅಚ್ಚರಿಯುಂಟು ಮಾಡುತ್ತದೆ.

ಜಲಪಾತ ತಲುಪುತ್ತಿದ್ದಂತೆ ರಸ್ತೆಯ ಬದಿಯಲ್ಲಿ ವಾಹನಗಳನ್ನು ಪಾರ್ಕ್ ಮಾಡಿ ಮುಂದೆ ಸಾಗಬೇಕಾಗುತ್ತದೆ. ಪ್ರವೇಶ ಶುಲ್ಕವಿದೆ. ಈ ಪರಿಸರದಲ್ಲಿಡೀ ಪ್ಲಾಸ್ಟಿಕ್ ನಿಷೇಧಿಸಿದ್ದಾರೆ. ಆದ್ದರಿಂದ ಪರಿಸರವಿಡೀ ಸ್ವಚ್ಛವಾಗಿದೆ. ಮಕ್ಕಳಿಗೆ ಮುದ ನೀಡಲು ಕಪಿಸೈನ್ಯವೇ ಎದುರಿಗೆ ಬರುತ್ತದೆ. ತಿನ್ನಲು ಕೊಟ್ಟರೆ ತೆಗೆದುಕೊಳ್ಳುವ ವಾನರಗಳು ಕೈಹಾಕಿ ತೆಗೆದುಕೊಳ್ಳುವ ಅಪಾಯವೂ ಇದೆ! ಜಲಪಾತದೆಡೆಗೆ ನಡೆಯುತ್ತ ಸಾಗುವ ದಾರಿಗೆ ಕಲ್ಲು ಹಾಸಿದ್ದಾರೆ. ಹಸಿರು ಚೆಲ್ಲುವ ಹಾದಿಯನ್ನು ನೋಡುವುದೇ ಒಂದು ಹಬ್ಬ. ಬಿದಿರು ಮೆಳೆಗಳು ಇಲ್ಲಿ ಕಮಾನಿನಂತೆ ಬೆಳೆದು ಪ್ರವಾಸಿಗರನ್ನು ಸ್ವಾಗತಿಸುತ್ತವೆ.

ಪಾರ್ಕ್ ಮಾಡುವಲ್ಲಿಗೆ ಸಮೀಪ ಮೊದಲಿಗೆ ಸಿಗುವ ವ್ಯೂ ಪಾಯಿಂಟ್‍ನಲ್ಲಿ ನಿಂತರೆ ಜಲಪಾತದ ಒಂದು ನೋಟ ಕಾಣಲು ಸಿಗುತ್ತದೆ. ಬಿದಿರುಮೆಳೆಗಳ ನಡುವೆ ನಡೆಯುತ್ತ ಹೋದರೆ ಜಲಪಾತದ ಮೇಲ್ಭಾಗಕ್ಕೇ ಹೋಗಬಹುದು. ಮೇಲ್ಭಾಗದಿಂದ ಜಲಪಾತವನ್ನು ನೋಡುವವರ ಸಂಖ್ಯೆ ಹೆಚ್ಚು. ಇಲ್ಲಿಂದ ನೋಡುವಾಗ ಚಾಲಕ್ಕುಡಿ ನದಿಯು ಭೋರ್ಗರೆಯುತ್ತ ಸುಮಾರು 80 ಅಡಿಗಳಷ್ಟು ಎತ್ತರದಿಂದ ಬೀಳುವುದನ್ನೂ ಮುಂದೆ ಜುಳುಜುಳು ಹರಿಯುತ್ತಹೋಗುವುದನ್ನೂ ನೋಡಬಹುದು. ಜಲಪಾತದ ಮೇಲ್ಭಾಗದಿಂದ ವೀಕ್ಷಿಸುವಾಗ ಬಹಳ ಎಚ್ಚರವಹಿಸಬೇಕು. ಕೈಯಲ್ಲಿ ಕ್ಯಾಮೆರಾ/ಸ್ಮಾರ್ಟ್ ಫೋನ್  ಹಿಡಿದು ಮೈಮರೆತರೆ ಅಪಾಯ ಎದುರಾಗಲೂಬಹುದು.

ಇನ್ನೊಂದು ದಾರಿಯಾಗಿ ಸಾಗಿದರೆ ನೀರು ಬೀಳುವಲ್ಲಿಗೇ ಹೋಗಿ ನೋಡಬಹುದು. ಇಲ್ಲಿಯೇ `ಗುರು’ ಚಿತ್ರದಲ್ಲಿ ಐಶ್ವರ್ಯಾ ರೈ `ಬರ್‍ಸೋ ರೇ ಮೇಘಾ’ ಹಾಡಿಗೆ ಕುಣಿದು ಅಭಿನಯಿಸಿದ್ದು. ಹಲವಾರು ಚಿತ್ರಗಳಲ್ಲಿ ಹಾಡಿನ ದೃಶ್ಯಗಳನ್ನು ಇದೇ ಪರಿಸರದಲ್ಲಿ ಚಿತ್ರೀಕರಿಸಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಅವರಂತೂ ಹೆಚ್ಚಾಗಿ ಇಲ್ಲಿಗೆ ಚಿತ್ರೀಕರಣಕ್ಕೆ ಬರುತ್ತಾರೆ. `ರಾವಣ್’ ಚಿತ್ರದ ಬಹುತೇಕ ದೃಶ್ಯಗಳೂ ಇದೇ ಪರಿಸರದಲ್ಲಿ ಶೂಟಿಂಗ್ ನಡೆದಿರುವುದು. ತಮಿಳರು ಇದನ್ನು `ಪುನ್ನಗೈ ಮನ್ನನ್’ ಜಲಪಾತವೆಂದೇ ಕರೆಯುತ್ತಾರೆ. ಅದುವರೆಗೆ ಅಜ್ಞಾತವಾಗಿದ್ದ ಜಲಪಾತ 1980ರ ದಶಕದಲ್ಲಿ ಕಮಲಹಾಸನ್ ಹಾಗೂ ರೇಖಾ ಅಭಿನಯದ ಈ ಚಿತ್ರದ ಮೂಲಕ ಹೊರಜಗತ್ತಿಗೆ ತೆರೆದುಕೊಂಡಿತು. ಇತ್ತೀಚೆಗಿನ ಬೃಹತ್ ಬಜೆಟ್ ಚಿತ್ರ `ಬಾಹುಬಲಿ’ಯ ಕೆಲವೊಂದು ದೃಶ್ಯಗಳೂ ಇಲ್ಲಿ ಚಿತ್ರಿತವಾಗಿವೆ. ಕನ್ನಡದ ಕೆಲವು ಹಾಡುಗಳನ್ನೂ ಇಲ್ಲಿ ಚಿತ್ರೀಕರಿಸಿದ್ದಾರೆ. ಈ ಪ್ರದೇಶಕ್ಕೆ ಅಷ್ಟು ಸುಲಭವಾಗಿ ಅನುಮತಿ ಸಿಗುವುದಿಲ್ಲ. (ಸಿನಿಮಾ ಚಿತ್ರೀಕರಣಗಳಿಗೆ ಅನುಮತಿ ಸಿಗುವುದು). ಮಳೆಗಾಲದಲ್ಲಿ ನೋಡಲೇಬೇಕಾದ ಜಲಪಾತಗಳಲ್ಲಿ ಇದು ಕೂಡ ಒಂದು.

ಆತಿರಪಿಳ್ಳಿಯಿಂದ ಸ್ವಲ್ಪ ಮುಂದೆ `ವಾಳಚ್ಚಾಲ್’ ಎಂಬಲ್ಲಿ ಇದೇ ನದಿ ಸ್ವಲ್ಪ ನಿಧಾನವಾಗಿ ಹರಿಯುವುದನ್ನು ಕಾಣಬಹುದು. ನದಿಯ ನೀರಿನ ಮಂಜುಳ ಧ್ವನಿಯನ್ನು ಇಲ್ಲಿ ಕೇಳಬಹುದು. ವರ್ಷದ ಹೆಚ್ಚಿನ ಸಮಯದಲ್ಲೂ ಇಲ್ಲಿ ನೀರು ಹಾಲಿನ ನೊರೆಯಂತೆ ಹರಿಯುತ್ತಿರುತ್ತದೆ.

ಹೋಗುವುದು ಹೇಗೆ?

ಕೇರಳದ ತ್ರಿಶೂರ್‍ಗೆ ಬೆಂಗಳೂರು, ಚೆನ್ನೈ ಮುಂತಾದೆಡೆಗಳಿಂದ ಟ್ರೈನ್ ಹಾಗೂ ಬಸ್ ಸಂಪರ್ಕವಿದೆ. ಮಂಗಳೂರಿನಿಂದ ತಿರುವನಂತಪುರಕ್ಕೆ ಹೋಗುವ ರೈಲುಗಳು ತ್ರಿಶೂರ್ ಆಗಿಯೇ ಹೋಗುತ್ತವೆ. ಮಂಗಳೂರು ಕಡೆಯಿಂದ ಚೆನ್ನೈ ಹೋಗುವ ಟ್ರೈನ್‍ಗಳಲ್ಲಿ ಹೋಗುವುದಾದರೆ ಶೋರ್ನೂರ್ ಜಂಕ್ಷನ್‍ನಲ್ಲಿಳಿದು ತ್ರಿಶೂರ್ ತಲುಪಬಹುದು. ತ್ರಿಶೂರ್‍ನಿಂದ ಚಾಲಕ್ಕುಡಿ ಸುಮಾರು 30 ಕಿ.ಮೀ. ಅಲ್ಲಿಂದ ಆತಿರಪಿಳ್ಳಿ 30 ಕಿ.ಮೀ. ದೂರದಲ್ಲಿದೆ. ವಸತಿಗಾಗಿ ತ್ರಿಶೂರ್, ಗುರುವಾಯೂರ್ ಹಾಗೂ ಚಾಲಕ್ಕುಡಿಗಳಲ್ಲಿ ಮಧ್ಯಮ ಹಾಗೂ ಲಕ್ಷುರಿ ಹೋಟೆಲುಗಳಿವೆ. `ಆತಿರಪಿಳ್ಳಿ’ ಜಲಪಾತವನ್ನು ನೋಡಲು ಹೋಗುವ ರಸ್ತೆಯ ಬದಿಯಲ್ಲೇ `ಡ್ರೀಮ್ ವಲ್ರ್ಡ್’ ಹಾಗೂ `ಸಿಲ್ವರ್ ಸ್ಟಾರ್ಮ್’ ಎಂಬ ಎರಡು ವಾಟರ್ ಥೀಮ್ ಪಾರ್ಕ್‍ಗಳಿವೆ. ಇಲ್ಲಿನ ನೀರಿನಾಟಗಳೂ ಯಾಂತ್ರಿಕ ಮನಸ್ಸಿನ ಜಂಜಡಗಳಿಗೆ ಒಂದಿಷ್ಟು ಹಿತ ನೀಡುತ್ತವೆ.

Amazon Big Indian Festival
Amazon Big Indian Festival

Copyright © 2016 TheNewsism

To Top