Awareness

ಪ್ರಾಣಿದಯೆಗಾಗಿ ಗೂಳಿಕಾಳಗ ನಿಷೇಧಿಸುವುದಾದರೆ ಬಿರಿಯಾನಿಯನ್ನೂ ಬ್ಯಾನ್ ಮಾಡಿ

ಸುಪ್ರೀಂ ಕೋರ್ಟ್ ನಿಷೇಧಿಸಿರುವ ಸಾಹಸಕ್ರೀಡೆ ಜಲ್ಲಿಕಟ್ಟು, ಕಂಬಳ ಮತ್ತು ಹೋರಿಹಬ್ಬಗಲ್ಲಲ್ಲಿ ಖ್ಯಾತ ನಟ ಕಮಲಹಾಸನ್ ಬೆಂಬಲ ವ್ಯಕ್ತಪಡಿಸಿರುವುದಾಗಿ ಇಂಡಿಯಾ ಟುಡೆ ಸುದ್ದಿವಾಹಿನಿ ವರದಿ ಮಾಡಿದೆ. ಇದೇ ವಾಹಿನಿ ಏರ್ಪಡಿಸಿರುವ ದಕ್ಷಿಣ ಭಾರತ ವಿಚಾರಕೂಟದಲ್ಲಿ ಕಮಲಹಾಸನ್, ‘ಜಲ್ಲಿಕಟ್ಟು, ಕಂಬಳ ಮತ್ತು ಹೋರಿಹಬ್ಬದಲ್ಲಿ ಪ್ರಾಣಿಹಿಂಸೆ ಆಗುತ್ತದೆ ಎನ್ನುವುದಾದರೆ ಬಿರಿಯಾನಿಯನ್ನೂ ನಿಷೇಧಿಸಿ. ಅಲ್ಲಿ ಪ್ರಾಣಿವಧೆ ನಡೆಯುತ್ತದೆ’ ಎಂದು ಪ್ರತಿಕ್ರಿಯಿಸಿರುವುದಾಗಿ ವರದಿ ಹೇಳುತ್ತದೆ.

ಗೂಳಿಗಳನ್ನು ಓಡಿಸುವ, ಅವುಗಳೊಂದಿಗೆ ಅಪಾಯಕಾರಿ ಆಟಕ್ಕಿಳಿಯುವ ಈ ಸಾಹಸಕ್ರೀಡೆಯ ಪರವಾಗಿಯೇ ಜನಾಭಿಪ್ರಾಯವಿರುವುದು ವಾಸ್ತವ. ಹೀಗಾಗಿ ಕಮಲಹಾಸನ್ ಅವರ ಈ ಹೇಳಿಕೆಗೆ ಬುದ್ಧಿಜೀವಿಗಣ ಹಾಗೂ ತಥಾಕಥಿತ ಪ್ರತಿಷ್ಠಿತರಿಂದ ವಿರೋಧಗಳು ಬರಬಹುದಾದರೂ ಜನವರ್ಗದ ಬೆಂಬಲ ಖಚಿತ.

ಹಾಗಾದರೆ ಪ್ರಾಣಿಹಿಂಸೆ ಚರ್ಚೆಗೆ ಅರ್ಥವಿಲ್ಲವೇ?

ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವಾಗ ಒಂದು ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕು. ಅದು ಜಲ್ಲಿಕಟ್ಟು, ಕಂಬಳ ಮತ್ತು ಹೋರಿಹಬ್ಬ ಅಲ್ಲಿ ಗೂಳಿ ಕಾಳಗವಿರಬಹುದು ಮತ್ಯಾವುದೇ ಸಂಗತಿಯಿರಬಹುದು ಅವುಗಳ ವಿರೋಧಕ್ಕೆ ತೂಕ ಬರುವುದು ಯಾವಾಗ ಎಂದರೆ, ಅದಕ್ಕೆ ಪರ್ಯಾಯಗಳನ್ನು ಸೂಚಿಸಿದಾಗ ಮಾತ್ರ. ದೇವರನ್ನು ವಿರೋಧಿಸುವುದು ದೊಡ್ಡ ಸಂಗತಿಯಲ್ಲ. ಆದರೆ ಅದರ ಬದಲಿಗೆ ಜನರನ್ನು ಹಿಡಿದಿಟ್ಟುಕೊಳ್ಳುವ ಪರ್ಯಾಯ ಐಡಿಯಾ ಒಂದನ್ನು ಮುಂದಿಡದಿದ್ದರೆ ಅವೆಲ್ಲ ಕೇವಲ ಸದ್ದು ಮಾಡುವ ವಿಷಯಗಳಾಗುತ್ತವಷ್ಟೆ.

ಇನ್ನಷ್ಟು ಸ್ಪಷ್ಟತೆ ಹೊಂದುವುದಾದರೆ… ಬಾಲ ಕಾರ್ಮಿಕ ಪದ್ಧತಿಯ ವಿರೋಧ ನಿಜಕ್ಕೂ ಉದಾತ್ತ ಆದರ್ಶವೆಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅಂಥ ಕಾರ್ಮಿಕ ಪದ್ಧತಿಯಿಂದ ಬಿಡಿಸಿದ ಬಾಲಕರಿಗೆ ಬದುಕಿನ ಬೇರೆ ಪಥ ತೋರದಿದ್ದರೆ ಸುಧಾರಕನೇ ವಿಲನ್ ಆಗುತ್ತಾನೆ. ಏಕೆಂದರೆ, ಆ ಬಾಲಕ-ಬಾಲಕಿ ದುಡಿಯುವಷ್ಟು ದಿನ ಹೊಟ್ಟೆಗೆ ಅನ್ನವಿತ್ತು. ಅವರ ಬಾಲ್ಯ ಮುರುಟಬಾರದು, ಭವಿಷ್ಯ ಕಮರಬಾರದು ಎಂಬುದೆಲ್ಲ ನಿಜ. ಆದರೆ ಹೊರಬಂದವರಿಗೆ ಅನ್ನ- ಅಕ್ಷರಕ್ಕೆ ಪ್ಲಾನ್ ಬಿ ಸಿದ್ಧವಿದೆಯಾ ಎಂಬುದರ ಮೇಲೆ ಹಿಂದಿನ ಕಾರ್ಯದ ಉದಾತ್ತತೆ ನಿರ್ಧಾರವಾಗುತ್ತದೆ. ಹಾಗಲ್ಲದೇ ಹೊಟೇಲ್ ಮಾಲೀಕನಿಗೆ ಕಾನೂನಿನ ಅಸ್ತ್ರ ತೋರಿಸಿ, ಅಲ್ಲಿ ದುಡಿಯುತ್ತಿದ್ದ ಹುಡುಗನನ್ನೇನೋ ಬಿಡಿಸಿದಿರಿ ಸರಿ. ಅಷ್ಟಕ್ಕೇ ಬಿಟ್ಟು ಬಂದರೆ ಮತ್ತದೇ ಹುಡುಗನ ಹೊಟ್ಟೆ ಮೇಲೆಯೇ ಹೊಡೆದಂತಾಯಿತಲ್ಲ?

ಜಲ್ಲಿಕಟ್ಟು, ಕಂಬಳ ಮತ್ತು ಹೋರಿಹಬ್ಬದಲ್ಲಿ ಈ ನೆಲೆಯಲ್ಲಷ್ಟೇ ನೋಡಲು ಸಾಧ್ಯ. ವರ್ಷಗಟ್ಟಲೇ ಗೂಳಿಯನ್ನು ಹೊಟ್ಟೆಹೊರೆಯುವುದೇ ಆ ಉದ್ದೇಶಕ್ಕಾಗಿ. ಅದಕ್ಕೆ ಪೌಷ್ಟಿಕ ಆಹಾರ ತಿನ್ನಿಸಿ ದಷ್ಟಪುಷ್ಟವಾಗಿ ಬೆಳೆಸಿ ಕೊನೆಗೊಮ್ಮೆ ಕದನಕಣದಲ್ಲಿ ಬಿಡುತ್ತಾರೆ. ಆ ಸಮಯದಲ್ಲಿ ಪ್ರಾಣಿಗೆ ಹಿಂಸೆಯಾಗುತ್ತದೆ ಅಂತ ನಿಷೇಧಿಸಿದ್ದರಿಂದ ಯಾವ ಪ್ರಾಣಿ ಕಲ್ಯಾಣವೂ ಆಗುವುದಿಲ್ಲ. ಜಲ್ಲಿಕಟ್ಟುವಿಗೆ ಸಿದ್ಧವಾಗಲೆಂದು ಇಷ್ಟುಕಾಲ ದೊಡ್ಡಿಯಲ್ಲಿ ಆಶ್ರಯ ಪಡೆದಿದ್ದ, ಉತ್ತಮ ದೇಖರೇಖಿ ಪಡೆಯುತ್ತಿದ್ದ ಹೋರಿಗಳು ಸಾಕುವವರ ದೃಷ್ಟಿಯಿಂದ ಅನುಪಯುಕ್ತ ಎಂದೆನಿಸಿ ಎಳವೆಯಲ್ಲೇ ಕಸಾಯಿಖಾನೆ ಸೇರುತ್ತವಷ್ಟೆ. ಏಕೆಂದರೆ ತೀರ್ಪು ಬರೆದ ನ್ಯಾಯಾಧೀಶರು, ದಾವೆ ಹಾಕಿದ ಪ್ರಾಣಿದಯಾಸಂಘದವರು ಇವರ್ಯಾರೂ ದೊಡ್ಡಿಯಲ್ಲಿ ಗೂಳಿ ಕಟ್ಟಿ ಸಾಕುವವರಲ್ಲವಲ್ಲ?

ಅಲ್ಲಿಗೆ ಏನು ಮಾಡಿದಂತಾಯಿತು?

ಜಲ್ಲಿಕಟ್ಟು, ಕಂಬಳ ಮತ್ತು ಹೋರಿಹಬ್ಬದಲ್ಲಿ ಎರಡೇಟು, ತಿವಿತ ತಿಂದು ಗೆದ್ದುಕೊಂಡು ಬಾಳುತ್ತಿದ್ದ ಗೂಳಿಯ ಬದುಕನ್ನು ಕಸಿದು ಮಾನವನ ಆಹಾರದ ಬಟ್ಟಲಲ್ಲಿ ಇಟ್ಟಿದ್ದಷ್ಟೇ ಹೆಚ್ಚುಗಾರಿಕೆ. ಹಾಗೆಂದೇ, ‘ಪ್ರಾಣಿದಯೆಗಾಗಿ ಜಲ್ಲಿಕಟ್ಟು, ಕಂಬಳ ಮತ್ತು ಹೋರಿಹಬ್ಬ ನಿಷೇಧಿಸುವುದಾದರೆ ಬಿರಿಯಾನಿಯನ್ನೂ ನಿಷೇಧಿಸಿ’ ಎಂದಿರುವ ಕಮಲಹಾಸನ್ ಮಾತುಗಳು ಅರ್ಥಪೂರ್ಣ ಎನಿಸುತ್ತವೆ.

Amazon Big Indian Festival
Amazon Big Indian Festival

Copyright © 2016 TheNewsism

To Top