cinema

ಪುಷ್ಪಕ ವಿಮಾನ ಏರಿದರೆ ಅಪ್ಪ-ಮಗಳು ಕಣ್ಣು ತೇವ ಮಾಡ್ತಾರೆ, ಮನಸ್ಸು ತುಂಬಿಕೊಳ್ತಾರೆ!

ರಮೇಶ್‍ ಅರವಿಂದ್‍ ನಟನೆಯ 100ನೇ ಚಿತ್ರ ಅಂತ ಭಾರೀ ನಿರೀಕ್ಷೆ ಹುಟ್ಟಿಸಿದ ಪುಷ್ಪಕ ವಿಮಾನ ನೋಡಿ ಬಂದ ನಂತರ ನಿಮ್ಮ ಕಣ್ಣಂಚಲಿ ನೀರು ತುಂಬಿಕೊಂಡು, ಭಾರವಾದ ಮನಸ್ಸಿನೊಂದಿಗೆ ಹೊರಬರುತ್ತೀರಿ. ಇದು ಕೋರಿಯನ್ ಮೂವಿ ರಿಮೇಕ್ ಆದರೂ ನೇಟಿವಿಟಿ ಕನ್ನಡಮಯ

ಅಪ್ಪ-ಮಗಳ ನಡುವಿನ ಸಂಬಂಧವನ್ನು ಮನೋಜ್ಞವಾಗಿ ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕ ಎಸ್‍. ರವೀಂದ್ರನಾಥ್‍ ಮಾಡಿದ್ದಾರೆ. ಆದರೆ ತಾಂತ್ರಿಕವಾಗಿ ಚಿತ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿರುವುದು ಛಾಯಾಗ್ರಾಹಕ ಭುವನ್‍ ಗೌಡ ಮತ್ತು ಹಿನ್ನೆಲೆ ಸಂಗೀತ ನೀಡಿದ ಚರಣ್‍ ರಾಜ್‍.

ರಮೇಶ್‍ ಅರವಿಂದ್ ಅವರ ನಟನೆಯ ಬಗ್ಗೆಯಂತೂ ಎರಡು ಮಾತಿಲ್ಲ. ತುಂಬಾ ದಿನಗಳ ನಂತರ ರಮೇಶ್‍ ತಾನೊಬ್ಬ ಪರಿಪೂರ್ಣ ನಟ ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಬಹುಶಃ ರಮೇಶ್‍ ಮೈಲುಗಲ್ಲಿಗೆ ಇದಕ್ಕಿಂತ ಉತ್ತಮ ಚಿತ್ರದ ಕಾಣಿಕೆ ಸಾಧ್ಯವಿಲ್ಲ.

ಬುದ್ಧಿಮಾಂದ್ಯ ಅಪ್ಪನಾಗಿ ರಮೇಶ್ ಇಡೀ ಚಿತ್ರ ಆವರಿಸಿಕೊಳ್ಳುತ್ತಾರೆ. ಹಾಡುಗಳಂತೂ ಕಣ್ಣು ತೇವ ಮಾಡಿಸುತ್ತದೆ. ಮಗಳಾಗಿ ಯುವಿನ ಪಾರ್ಥವಿ, ರವಿ ಕಾಳೆ..ಎಲ್ಲಾ ಪಾತ್ರಗಳು ನೆನಪಿನಲ್ಲಿ ಉಳಿಯುತ್ತವೆ. ಏಕೆಂದರೆ ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿರುವುದು.

ಕಥೆ ಅತ್ಯಂತ ಸರಳವಾಗಿದೆ. ಬುದ್ಧಿಮಾಂದ್ಯ ಅಪ್ಪ-ಮಗಳು ಸುಂದರವಾದ ತಮ್ಮದೇ ಆದ ಸುಂದರ ಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಅವರಿಗೆ ಇದ್ದ ಒಂದೇ ಆಸೆ `ವಿಮಾನ’ ಈ ಪುಷ್ಪಕ ವಿಮಾನವನ್ನು ಮಗಳಿಗೆ ಕೊಡಿಸುವುದೇ ಅಪ್ಪನ ಗುರಿ. ಅಪ್ಪ ಪುಟ್ಟ ವಿಮಾನ ಖರೀದಿಸಿ ಮಗಳಿಗೆ ಉಡುಗೊರೆ ಕೊಡಲು ಪ್ರಯತ್ನಿಸುತ್ತಾನೆ. ಆದರೆ ಮಾಡದ ತಪ್ಪಿಗೆ ಜೈಲು ಸೇರುತ್ತಾನೆ. ಆದರೆ ಅವನ ಮುಗ್ಧತೆ ಹೇಗೆ ಅಧಿಕಾರಿಗಳನ್ನು, ಕೈದಿಗಳನ್ನು ಗೆಲ್ಲುತ್ತಾನೆ.ಹೇಗೆ ಹೊರಬರುತ್ತಾನೆ. ಮಗಳಿಗೆ `ವಿಮಾನ’ ತೋರಿಸುತ್ತಾನಾ ಎಂಬುದನ್ನು ಚಿತ್ರ ನೋಡಿಯೇ ಆಸ್ವಾದಿಸಬೇಕು.

ಇದೇ ಮೊದಲ ಬಾರಿ ಕನ್ನಡ ಚಿತ್ರವೊಂದು ಚಿತ್ರಕಥೆ ವಿಷಯದಲ್ಲಿ ಆಸ್ಕರ್‍ ಪ್ರಶಸ್ತಿಗೆ ನಾಮಂಕಿತಗೊಂಡಿದೆ. ಇದು ಕನ್ನಡಿಗರ ಹೆಮ್ಮೆಯ ವಿಷಯವೂ ಹೌದು. ಈ ಎಲ್ಲಾ ಕಾರಣಗಳಿಗಾಗಿಯಾದರೂ ಈ ಚಿತ್ರವನ್ನು ತಪ್ಪದೇ ನೋಡಲೇಬೇಕು. ಅದು ಹೆಂಡತಿ-ಮಕ್ಕಳೊಂದಿಗೆ ನೋಡಿದರೆ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ.



Comments

comments

Click to comment

Leave a Reply

To Top