Karnataka

ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳ ಮೇಲೆ ಕಾಯಿದೆ ತರುವ ಬದಲು ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟವನ್ನು ಏಕೆ ಏರಿಸಬಾರದು??

ರಾಜ್ಯ ಸರ್ಕಾರದ ಏಕರೂಪ ಸೇವಾಶುಲ್ಕ ವಿರೋಧಿಸಿ ಖಾಸಗಿ ವೈದ್ಯರ ಮುಷ್ಕರ ಆರಂಭವಾಗಿದೆ. ಖಾಸಗಿ ಆಸ್ಪತ್ರೆಗಳ ಅಸೋಸಿಯೇಷನ್ ಹಾಗೂ ಮೆಡಿಕಲ್ ಅಸೋಸಿಯೇಷನ್ ಜಂಟಿಯಾಗಿ ಮೆಜೆಸ್ಟಿಕ್‌ ಸಮೀಪದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಫ್ರೀಡಂ ಪಾರ್ಕ್‌ ತನಕ ಜಾಥ ನಡೆಸಿ, ನಂತರಪ್ರತಿಭಟನಾ ಸಭೆ ನಡೆಸಲಿದ್ದಾರೆ. ರಾಜ್ಯದಾದ್ಯಂತ ವಿವಿಧ ಖಾಸಗಿ ಆಸ್ಪತ್ರೆಯ 15 ಸಾವಿರಕ್ಕೂ ಅಧಿಕ ವೈದ್ಯರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಏನಿದು ಏಕರೂಪ ಸೇವಾಶುಲ್ಕಕಾಯ್ದೆ ?

ತಿದ್ದುಪಡಿ ವಿಧೇಯಕದ ಪ್ರಕಾರ, ಆಸ್ಪತ್ರೆಗಳು ಸರ್ಕಾರದ ಚಿಕಿತ್ಸಾ ದರಕ್ಕಿಂತ ಹೆಚ್ಚು ಹಣ ಸಂಗ್ರಹಿಸಿದರೆ 25 ಸಾವಿರ ರೂಪಾಯಿಗಳಿಂದ 5 ಲಕ್ಷ ರೂ.ವರೆಗೆ ದಂಡ ಮತ್ತು ಕನಿಷ್ಠ ೬ ತಿಂಗಳಿನಿಂದ 3 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾಪವಿದೆ. ಅಲ್ಲದೆ ಸರ್ಕಾರ ನೀಡಿದ ದರಗಳನ್ನು ಆಸ್ಪತ್ರೆಯ ಸ್ವಾಗತ ಕೊಠಡಿಯಲ್ಲೇ ಕಡ್ಡಾಯವಾಗಿ ಪ್ರಕಟಿಸಬೇಕು ಎಂಬ ಉಲ್ಲೇಖವೂ ಇದೆ. ಈ ಕುರಿತಂತೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ(ತಿದ್ದುಪಡಿ) ವಿಧೇಯಕ-2017ನ್ನು ಆರೋಗ್ಯ ಸಚಿವ ರಮೇಶ್ ಕುಮಾರ್ ಮಂಗಳವಾರ ಸದನದಲ್ಲಿ ಮಂಡಿಸಿದ್ದರು.

ಖಾಸಗಿ ವೈದ್ಯಕೀಯ ಸಂಸ್ಥೆಗಳು ರಾಜ್ಯ ಸರ್ಕಾರದ ವಿಧೇಯಕ ವಿರೋಧಿಸಿ ಒಂದು ದಿನದ ಸಾಂಕೇತಿಕ ಮುಷ್ಕರ ನಡೆಸುತ್ತಿದ್ದಾರೆ. ವೈದ್ಯರ ಮುಷ್ಕರಕ್ಕೆ ನಾರಾಯಣ ಹೃದಯಾಲಯದ ಸಂಸ್ಥಾಪಕ ಡಾ.ದೇವಿಪ್ರಸಾದ್ ಶೆಟ್ಟಿ, ಕ್ಲೌಡ್ ನೈನ್ ಆಸ್ಪತ್ರೆಯ ನಿರ್ದೇಶಕ ಡಾ.ಕಿಶೋರ್ ಕುಮಾರ್, ಮಣಿಪಾಲ್ ಆಸ್ಪತ್ರೆ ಅಧ್ಯಕ್ಷ ಡಾ.ಸುದರ್ಶನ ಬಲ್ಲಾಳ್ ಸೇರಿದಂತೆ ಬಹುತೇಕ ಎಲ್ಲಾ ಖಾಸಗಿ ಆಸ್ಪತ್ರೆಗಳ ವೈದ್ಯರು ಭಾಗಿಯಾಗಿದ್ದಾರೆ.

ಇದೇ ವೇಳೆ ಮಾತನಾಡಿದ ಐ.ಎಂ.ಎ ಅಧ್ಯಕ್ಷ ಡಾ. ರವೀಂದ್ರ ಅವರು, ಸಚಿವ ರಮೇಶ್ ಕುಮಾರ್ ಮತ್ತು ಕೈ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಯಾವುದೋ ಒಂದು ಆಸ್ಪತ್ರೆ ಅಥವಾ ಎಲ್ಲೋ ಒಂದಿಬ್ಬರು ವೈದ್ಯರು ತಪ್ಪು ಮಾಡಿದ್ದಾರೆ ಎಂಬ ಮಾತ್ರಕ್ಕೆ ಎಲ್ಲರ ಮೇಲೂ ಕ್ರಮ ತೆಗೆದುಕೊಳ್ಳುವುದು ಸರಿಯಲ್ಲ. ಶೇ.99.99ರಷ್ಟು ವೈದ್ಯರು ಸೇವಾ ಮನೋಭಾವವನ್ನೇ ಹೊಂದಿದ್ದಾರೆ. ನಿಮಗೆ ಯಾವುದಾದರೂ ವೈದ್ಯರಿಂದ ವೈಯಕ್ತಿಕವಾಗಿ ಅನ್ಯಾಯವಾದ ಕಾರಣದಿಂದ ಈ ವಿಧೇಯಕ ಜಾರಿಗೆ ತರಲು ಹೊರಟ್ಟಿದ್ದೀರಾ ಅನಿಸುತ್ತದೆ ಎಂದು ಆರೋಪಿಸಿದರು. ನೀವು ನಮ್ಮನ್ನು ಲಜ್ಜೆಗೇಡಿ, ಲೂಟಿಕೋರರು ಅಂತ ಕರೆಯೋಕೆ ನಾವು ಹೆಂಗೆಂಗೋ ಹುಟ್ಟಿಬಂದಿಲ್ಲ. ನಮಗೂ ಸಂಸ್ಕಾರ ಇದೆ. ಚಿಕಿತ್ಸೆಗೆ ಇಷ್ಟು ಅಂತಾ ಫಿಕ್ಸ್ ಮಾಡೋಕೆ ಇದು ಗಾರೆ ಸಿಮೆಂಟ್ ಕೆಲ್ಸ ಅಲ್ಲ. ಮೊದಲು ವೈದ್ಯರ ಸೇವೆನಾ ಅಥವಾ ಟ್ರೇಡ್ ಬ್ಯುಸಿನೆಸ್ ಅಂತಾ ಸ್ಪಷ್ಟತೆ ಕೊಡಿ. ಗನ್ ಪಾಯಿಂಟ್ ಇಟ್ಟು ಕೆಲ್ಸ ಮಾಡಿಸಬೇಡಿ. ಮಾನವೀಯತೆ ಪಾಠ ನಿಮ್ಮಿಂದ ಕಲಿಯಬೇಕಿಲ್ಲ. ಮಾನವೀಯತೆ ಇಟ್ಕೊಂಡು ಈ ವೃತ್ತಿಗೆ ಬಂದಿದ್ದೇವೆ ಎಂದರು.

ಸರ್ಕಾರಿ ಆಸ್ಪತ್ರೆ ಸರಿಯಿದ್ರೆ ಜನ ಯಾಕೆ ಖಾಸಗಿಗೆ ಬರ್ತಾರೆ. ನೀವು ಸರ್ಕಾರಿ ಆಸ್ಪತ್ರೆಯನ್ನು ಸರಿಯಾಗಿ ಇಟ್ಟುಕೊಂಡಿಲ್ಲ. ಸರ್ಕಾರದ ಈ ವಿಧೇಯಕದಿಂದ ಖಾಸಗಿ ಆಸ್ಪತ್ರೆಗೆ ತೊಂದರೆಯಾಗಲಿದೆ ಎಂದು ನಾರಾಯಣ ಹೃದಯಾಲಯದ ಸಂಸ್ಥಾಪಕ ಅಧ್ಯಕ್ಷ ಡಾ. ದೇವಿ ಶೆಟ್ಟಿ ಕಿಡಿ ಕಾರಿದರು. ರಾಜ್ಯ ಸರ್ಕಾರ ಈಗ ಮಂಡಿಸಿರುವ ವಿಧೇಯಕದ ಮುಖ್ಯಭಾಗ ಎಂದರೆ ವೈದ್ಯರ ವಿರುದ್ಧ ದೂರು ದಾಖಲಿಸಲು ಅವಕಾಶ ನೀಡಿರುವುದು. ಆ ಪ್ರಕಾರ, ವೈದ್ಯರನ್ನು ಬಂಧಿಸಿ, ಐದು ವರ್ಷ ಜೈಲು ಶಿಕ್ಷೆ ನೀಡಲು ಅವಕಾಶ ಇದೆ. ರೋಗಿಗೆ ಚಿಕಿತ್ಸೆ ನೀಡುವಾಗ ವೈದ್ಯನು ಉದ್ದೇಶ ಪೂರ್ವಕವಾಗಿ ತಪ್ಪು ಮಾಡುವುದಿಲ್ಲ. ಚಿಕಿತ್ಸೆಗೆ ಸ್ಪಂದಿಸದೇ ರೋಗಿ ಸತ್ತಾಗ ವೈದ್ಯರ ಮೇಲೆ ಕ್ರಮ ತೆಗೆದುಕೊಳ್ಳುವುದಾದರೆ ಕಠಿಣವಾದ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರೇ ಹಿಂದೇಟು ಹಾಕುತ್ತಾರೆ ಎಂದರು. ರಾಜ್ಯದ 30 ರಿಂದ 50 ಬೆಡ್‌ ಆಸ್ಪತ್ರೆಗಳಿಗೆ ಇದರ ನೇರ ಪರಿಣಾಮ ಬೀರಲಿದೆ. ಅಲ್ಲದೇ ಆರೋಗ್ಯ ಸೇವೆ ಒದಗಿಸುತ್ತಿರುವ ಶೇ. 70ರಷ್ಟು ಖಾಸಗಿ ಆಸ್ಪತ್ರೆಗಳು ಸೇವೆಯನ್ನೇ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ಹೇಳಿದರು.

Amazon Big Indian Festival
Amazon Big Indian Festival

Copyright © 2016 TheNewsism

To Top