Karnataka

ದಸರಾ ನೋಡೋಕ್ಕೆ ಮೈಸೂರಿಗೆ ಹೋಗದೆ ಇದ್ರೂ ಅಲ್ಲಿ ನಡೀತಿರೋ ಆಹಾರ ಮೇಳಕ್ಕೆ ಹೋಗೋದು ಮಾತ್ರ ಮಿಸ್ ಮಾಡ್ಕೋಬೇಡಿ..

ನಾಡಹಬ್ಬ ದಸರಾ ಕಾರ್ಯಕ್ರಮಗಳಲ್ಲಿ ಅತ್ಯಂತ ಹೆಚ್ಚು ಜನರನ್ನ ಆಕರ್ಷಿಸುವಲ್ಲಿ ಆಹಾರ ಮೇಳ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಏನಪ್ಪಾ ಅಂಥದ್ದು ಅಂದರೆ ಆದಿವಾಸಿಗಳ ಆಹಾರ. ಇಂತಹ ಆಹಾರ ಮೇಳಕ್ಕೆ ದೇಶ, ವಿದೇಶ, ಸ್ಥಳೀಯ ಪ್ರವಾಸಿಗರು ದಸರೆಗೆಂದು ಬಂದ ಮೇಲೆ ಆಹಾರ ಮೇಳಕ್ಕೆ ಬರುವುದನ್ನ ಮರೆಯುವುದಿಲ್ಲ. ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕಳೆದ ವರ್ಷ ಸರಳವಾಗಿ ದಸರಾ ಆಚರಿಸಲಾಗಿತ್ತು. ಹೀಗಾಗಿ ಆಹಾರಮೇಳವನ್ನು ಕೈಬಿಡಲಾಗಿತ್ತು. ಈ ಬಾರಿ ದಸರಾವನ್ನು ಮಿತ-ಹಿತವಾಗಿ ಆಚರಿಸಲಾಗುತ್ತಿದೆ.

ಈ ಸಾರಿ ದಸರಾ ಮಹೋತ್ಸವದ ಜನಪ್ರಿಯ ಆಹಾರ ಮೇಳವನ್ನು ಇದೇ ಮೊದಲ ಬಾರಿಗೆ ನಗರದ ಎರಡು ಕಡೆಗಳಲ್ಲಿ ಕಮ್ಮಿಕೊಳ್ಳಲಾಗಿದೆ. ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ 100 ಮಳಿಗೆ, ಲಲಿತ್‌ಮಹಲ್‌ ಹೋಟೆಲ್‌ ಬಳಿಯ ಮುಡಾ ಮೈದಾನದಲ್ಲಿ 75 ಮಳಿಗೆಗಳನ್ನು ಹಾಕಲಾಗಿದೆ. ಅಕ್ಟೋಬರ್ 1 ರಿಂದ 9 ದಿನಗಳ ಕಾಲ ಆಹಾರ ಮೇಳ ನಡೆಯಲಿದ್ದು ಕರ್ನಾಟಕ ಹಾಗೂ ಹೊರ ರಾಜ್ಯಗಳ ರುಚಿಕರವಾದ ಆಹಾರಗಳನ್ನು ಸವಿಯಬಹುದಾಗಿದೆ.

ವಿಶೇಷವಾದ ಅಡಿಗೆಗಳು:

ಆದಿವಾಸಿಗಳ ಬಂಬೂ ಬಿರಿಯಾನಿ, ಬಿದರಕ್ಕಿ ಪಾಯಸ, ಸುಟ್ಟ ಕಾಡು ಗೆಣಸು, ಮಾಕಾಳೆ ಬೇರಿನ ಟೀ, ಮುದ್ದೆ-ನಳ್ಳಿ ಸಾರು ಜೊತೆಗೆ ಈ ಬಾರಿ ಹೊಸ ಅಡುಗೆಗಳನ್ನು ಪರಿಚಯಿಸಲು ಬುಡಕಟ್ಟು ಜನರು ತಯಾರಿ ನಡೆಸುತ್ತಿದ್ದಾರೆ. ಹೀಗಾಗಿ ಮೈಸೂರು ದಸರಾ -2017ರ ಆಹಾರ ಮೇಳದಲ್ಲೂ ಆದಿವಾಸಿಗಳ ಸಾಂಪ್ರದಾಯಿಕ ಆಹಾರದ ರುಚಿ ಸವಿಯಬಹುದಾಗಿದೆ. ಇದಕ್ಕಾಗಿ ಇಂದು ವಿವಿಧ ಹಾಡಿಗಳಿಂದ ಆದಿವಾಸಿಗಳು ಮೈಸೂರಿಗೆ ಬಂದು ಸೇರಿದ್ದಾರೆ.

ಸ್ಥಳೀಯ ಹೋಟೆಲ್‌ಗಳಿಂದ ಪಂಚತಾರಾ ಹೋಟೆಲ್‌ಗಳವರೆಗೆ ಆಹಾರ ಮೇಳದಲ್ಲಿ ಮಳಿಗೆಗಳನ್ನು ತೆರೆಯಲಿದ್ದು, ಸಾರ್ವಜನಿಕರು, ಪ್ರವಾಸಿಗರು ದಸರಾ ಆಹಾರ ಮೇಳದಲ್ಲಿ ನಾಲಿಗೆ ರುಚಿ ತಣಿಸುವ ವಿವಿಧ ಬಗೆಯ ಖಾದ್ಯಗಳ ರುಚಿಯನ್ನು ಸವಿಯಬಹುದಾಗಿದೆ.

 

Amazon Big Indian Festival
Amazon Big Indian Festival

Copyright © 2016 TheNewsism

To Top