God

ಪುರಾಣ ಪ್ರಸಿದ್ಧ ವಿದುರಾಶ್ವತ್ಥ ದೇವಸ್ಥಾನದ ಬಗ್ಗೆ ನಿಮಗೆಷ್ಟು ಗೊತ್ತು?

ವಿದುರಾಶ್ವತ್ಥ ಬರಿ ದೇಗುಲವಲ್ಲ, ಎಲ್ಲೆಡೆ ನಾಗರ ಕಲ್ಲುಗಳಿಂದಲೇ ಅಲಂಕೃತಗೊಂಡಿರುವ ನಾಗಬನ, ಉತ್ತರ ಪಿನಾಕಿನಿಯ ನದಿ ದಡದಲ್ಲಿರುವ ವಿದುರ ನೆಟ್ಟಿರುವ ಅಶ್ವತ್ಥ ವೃಕ್ಷದ ಕೆಳಗೆ ರಾರಾಜಿಸುತ್ತಿರುವ ಶ್ರೀ ನಾರಾಯಣನನ್ನ ನೋಡಲು ಎರಡು ಕಣ್ಣುಗಳು ಸಾಲದು. ಮಹಾಭಾರತ ಮಹಾಕಾವ್ಯವನ್ನು ಬರೆದ ಶ್ರೀ ನ್ಯಾಯಾ ಮಹರ್ಷಿಗಳ ಪುತ್ರ, ದುರ್ಯೋಧನನ ಚಿಕ್ಕಪ್ಪನಾದ ವಿದುರನೇ ನೆಟ್ಟು ಬೆಳಸಿದನೆಂದು ಹೇಳಲಾದ ಬೃಹದಾಕಾರದ ಅಶ್ವತ್ಥ ಮರದಿಂದಲೇ ಈ ಊರಿಗೆ ವಿದುರಾಶ್ವತ್ಥ ಎಂಬ ಹೆಸರೂ ಬಂದಿದೆ.

ದುರ್ಯೋಧನನ ದುರಾಡಳಿತವನ್ನು ಸಹಿಸಲಾಗದೆ ಅವನ ಚಿಕ್ಕಪ್ಪನಾದ ವಿದುರನು ರಾಜ್ಯ ಬಿಟ್ಟು ಹೊರಬಂದು ಮೈತ್ರೇಯ ಮುನಿಯ ಆಶ್ರಮದಲ್ಲಿ ಕೆಲಕಾಲ ತಂಗಿದ್ದು ನಂತರ ಅವರ ಜೊತೆಯಲ್ಲಿ ಉತ್ತರ ಪಿನಾಕಿನಿಯ ಕಡೆಗೆ ತೀರ್ಥಯಾತ್ರೆಗೆ ಹೊರಡುತ್ತಾರೆ. ಒಂದು ಸಂಜೆಯ ವೇಳೆಯಲ್ಲಿ ಮೈತ್ರೇಯ ಮುನಿಯು ಆ ನದಿಯಲ್ಲಿ ಜಳಕ ಮಾಡುತ್ತಿರುವಾಗ ಅಶ್ವತ್ಥ ವೃಕ್ಷದ ಸಸಿಯೊಂದು ನೀರಿನಲ್ಲಿ ತೇಲುತ್ತಾ ಬಂದು ಅವರಿಗೆ ಸಿಗುತ್ತದೆ, ತ್ರಿಕಾಲ ಜ್ಞಾನಿಗಳಾದ ಮುನಿಗಳು ಅದನ್ನು ದೈವೇಚ್ಛೆಯಂದು ತಿಳಿದು ವಿದುಅನಿಗೆ ನದಿ ತೀರದಲ್ಲಿ ಆ ಸಸಿಯನ್ನು ನೆಡುವಂತೆ ಆಜ್ಞಾಪಿಸುತ್ತಾರೆ. ಇದು ಸರ್ವಶ್ರೇಷ್ಠವಾದ ವೃಕ್ಷ ಇದನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದ್ದಲ್ಲಿ ಮೋಕ್ಷವು ಖಚಿತ ಎಂದು ಹೇಳಿ ಮೈತ್ರೇಯ ಮುನಿಯು ತನ್ನ ತೀರ್ಥಯಾತ್ರೆಯನ್ನು ಮುಂದುವರಿಸಿದರು.

ಮೈತ್ರೇಯ ಮುನಿಯ ಆಜ್ಞೆಯಂತೆ ವಿದುರನು ಶ್ರದ್ಧಾ ಭಕ್ತಿಯಿಂದ ಪೂಜಿಸಿ ಆ ಸಸಿಯನ್ನು ಅಲ್ಲಿಯೇ ಸಕಲ ಪೂಜಾ ಕೈಂಕರ್ಯಗಳಿಂದ ನೆಟ್ಟು ನಿರಂತರ ಪೂಜಿಸುತ್ತ ಮೋಕ್ಷ ಹೊಂದಿದನೆಂದು, ಆ ಸ್ಥಳ ಅಂದಿನಿಂದ ವಿದುರಾಶ್ವತ್ಥ ವಾಯಿತೆಂದು ಪುರಾಣ ಕತೆಯಿಂದ ತಿಳಿದುಬರುತ್ತದೆ. ಅಂದಿನಿಂದ ಈ ವೃಕ್ಷವು ಪೂಜನೀಯ ಸ್ಥಾನವನ್ನು ಪಡೆದುದರಿಂದ ಮಕ್ಕಳಾಗದವರು, ನಾಗದೋಷವಿರುವವರು ಇಲ್ಲಿಗೆ ಬಂದು ಪೂಜೆಯನ್ನು ನೆರವೇರಿಸಿ ನಾಗರಕಲ್ಲುಗಳನ್ನು ನೆಟ್ಟು ತಮ್ಮ ಇಷ್ಟಾರ್ಥ ಗಳನ್ನೂ ನೆರವೇರಿಸಿ ಕೊಂಡು ಪುನೀತರಾಗಿದ್ದಾರೆ.ಹೀಗಾಗಿಯೇ ಇಲ್ಲಿ ಮತ್ತೇಳೂ ಕಂಡು ಬಾರದಷ್ಟು ನಾಗರಕಲ್ಲುಗಳನ್ನೂ ಕಾಣಬಹುದು. ನೆರೆಯ ಆಂಧ್ರ ಮತ್ತು ನಮ್ಮ ರಾಜ್ಯದ ನೂರಾರು ಭಕ್ತರು ನಿತ್ಯ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಅಮೃತ ಶಿಲೆಯ ಬಲಮುರಿ ಗಣಪ, ಅಶ್ವತ್ಥನಾರಾಯಣ ಗುಡಿ, ಭವಾನಿ ಶಂಕರ, ಶ್ರೀರಾಮ, ವೀರಾಂಜನೇಯ ಸ್ವಾಮೀ, ಶ್ರೀದೇವಿ, ಭೂದೇವಿ ದೇವಾಲಯಗಳು ಇಲ್ಲಿಯ ಮತ್ತೊಂದು ಆಕರ್ಷಣೆಯಾಗಿವೆ..

ಈ ದೇಗುಲದ ಸಮುಚ್ಚಯದ ಹಿಂದಿನ ತೋಟದ ಆವರಣದಲ್ಲಿ, ಭಾರತ ಸಂಗ್ರಾಮದಲ್ಲಿ ಹುತಾತ್ಮರಾದ ೧೦ ಮಂದಿ ದೇಶಭಕ್ತರ ಸ್ಮರಣಾರ್ಥ 1962 ರಲ್ಲಿ ನಿರ್ಮಿಸಲಾದ ಸ್ಮಾರಕ ಕಂಬವು ರಾಷ್ಟ್ರಪ್ರೇಮದ ಕುರುಹಾಗಿ ನಿಂತಿದೆ. ಪ್ರತಿ ವರ್ಷ ಚೈತ್ರ ಹುಣ್ಣಿಮೆಯಂದು ಇಲ್ಲಿ ವಿಶೇಷ ಜಾತ್ರೆ ನಡೆಯುತ್ತದೆ. ಬೆಂಗಳೂರಿನಿಂದ 80 ಕಿಮಿ ದೂರದಲ್ಲಿರುವ ವಿದುರಾಶ್ವತ್ಥವು ಗೌರೀಬಿದನೂರಿನಿಂದ ಹಿಂದೂಪುರ ಮಾರ್ಗದಲ್ಲಿ ಕೇವಲ 6 ಕಿಮಿ ದೂರದಲ್ಲಿದೆ. ಬೆಂಗಳೂರು, ದೊಡ್ಡಬಳ್ಳಾಪುರ, ಗೌರಿಬಿದನೂರು ಮತ್ತು ಹಿಂದೂಪುರದಿಂದ ಸಾಕಷ್ಟು ಬಸ್ ಸೌಕರ್ಯವಿದೆ. ಗೌರೀಬಿದನೂರಿನಿಂದ ಆಟೋಗಳಲ್ಲಿ ಹೋಗಿ ಬರಬಹುದು.

Amazon Big Indian Festival
Amazon Big Indian Festival

Copyright © 2016 TheNewsism

To Top