God

ಆನಂದ ಮತ್ತು ನೆಮ್ಮದಿಯನ್ನು ಹೆಚ್ಚಿಸುವ ಪರಿಸರದಲ್ಲಿರುವ ಆನಂದಗಿರಿಯ ಶ್ರೀ ಆನಂದ ಲಿಂಗೇಶ್ವರ ಸ್ವಾಮಿಯನ್ನು ಜೀವಮಾನದಲ್ಲೊಮ್ಮೆ ನೋಡಲೇ ಬೇಕು..

ಬೆಂಗಳೂರು ಮಹಾನಗರದ ರಾಷ್ಟ್ರೀಯ ಹೆದ್ದಾರಿ 7 ರಲ್ಲಿರುವ ಹೆಬ್ಬಾಳದ ಪರಿಸರದಲ್ಲೊಂದು ಪುಟ್ಟ ಬೆಟ್ಟವಿದೆ. ನೋಡಲು ಸಾಮಾನ್ಯವಾಗಿದ್ದರೂ ಇಲ್ಲೊಂದು ಚೋಳರ ಕಾಲದ ಸುಂದರ ದೇವಾಲಯವಿದೆ. ಪಾಂಡವರು ವನವಾಸದ ಕಾಲದಲ್ಲಿ ತಾಯಿ ಕುಂತಿ ದೇವಿಯ ಸಮೇತ ಇಲ್ಲಿ ಬಂದು ತಂಗಿದ್ದರಂತೆ.ಇದರ ಕುರುಹಾಗಿ ಕುಂತಿ ಬಂದೆ, ಕುಂತಿಗ್ರಾಮ, ಭೀಮನ ಹೆಜ್ಜೆಯನ್ನು ಪ್ರತಿಬಿಂಬಿಸುವ ಬೃಹತ್ ಬಂಡೆಗಳನ್ನು ಕಾಣುವ ಒಂದು ಪುರಾಣ ಮತ್ತು ಐತಿಹಾಸಕ ಹಿನ್ನಲೆಯಿರುವ ಹಸಿರ ಪರಿಸರವೇ ಹೆಬ್ಬಾಳದ ಚೋಳನಾಯಕನ ಹಳ್ಳಿಯ ಶ್ರೀ ಆನಂದಗಿರಿಯ ಆನಂದ ಲಿಂಗೇಶ್ವರ ಸ್ವಾಮೀ ಸನ್ನಿಧಿ.

ಹಳ್ಳಿಯ ಹೆಸರೇ ಸೂಚಿಸುವಂತೆ ಚೋಳರ ಕಾಲದಲ್ಲಿ ನಿರ್ಮಾಣವಾಯಿತೆಂದು ಹೇಳಲಾದ ಈ ದೇಗುಲವು ಒಂದು ನೂರಕ್ಕೂ ಹೆಚ್ಚು ಮೆಟ್ಟಿಲುಗಳಿರುವ ಸದಾ ತಂಪೆರೆಯುವ ಹಸಿರ ಗುಡ್ಡದ ಮೇಲಿದೆ. ಅಚ್ಚ ಹಸಿರು ಸಿರಿಯನ್ನು ಹೊದ್ದ ಬೃಹತ್ ಕಲ್ಲು ಬಂಡೆಗಳನ್ನು ಸಮುಚ್ಚಯ್ದಲ್ಲಿ ಎತ್ತರದ ಪ್ರದೇಶದಲ್ಲಿ ದೇಗುಲವು ನಿರ್ಮಾಣವಾಗುವುದರಿಂದ ತನ್ನ ಸಹಜ ಸೌಂದರ್ಯದಿಂದ ಎಲ್ಲರ ಗಮನ ಸೆಳೆಯುತ್ತದೆ. ಬಿಲ್ವಪತ್ರೆಯ ಮರದ ಎದುರಿಗೆ ಆನಂದ ಲಿಂಗೇಶ್ವರ ಸ್ವಾಮಿಯು, ಬಲಕ್ಕೆ ಆನಂದ ಭವಾನಿ ಮತ್ತು ಎಡಕ್ಕೆ ಆನಂದ ಗಜಾನನನ ವಿಗ್ರಹಗಳು ಸ್ಥಾಪಿಸಲ್ಪಟ್ಟಿವೆ.

೨೦೦೩ರಲ್ಲಿ ಸುಮಂಗಲಿ ಸೇವಾಶ್ರಮ ಟ್ರಸ್ಟ್ ವತಿಯಿಂದ ಪುನಃ ಜೀರ್ಣೋದ್ದಾರವನ್ನು ಕಂಡ ಈ ದೇಗುಲದ ಪರಿಸರದ ಮೇಲ್ಮೆ ಲಕ್ಷಣಗಳು ಅತ್ಯಂತ ಆಕರ್ಷಣೀಯವಾಗಿದೆ. ಇಲ್ಲಿಯ ಆನೆಯಾಕಾರದ ಬಂಡೆಯಂತೂ ನೋಡುಗರನ್ನು ಮಂತ್ರ ಮುಗ್ದಗೊಳಿಸುತ್ತದೆ. ದೇಗುಲದ ಕೆಳಗೆ ಸುಮಂಗಲಿ ಸೇವಾಶ್ರಮಕ್ಕೆ ಹೋಗುವ ದಾರಿಯಲ್ಲಿ ಗುಹೆಯೊಂದು ಇದ್ದು ಇಲ್ಲಿಂದ ನಂದಿದುರ್ಗ ಹಾಗು ಶಿವಗಂಗೆಗೆ ಹೋಗಗಳು ಎರಡು ಪ್ರತ್ಯೇಕ ಸುರಂಗ ಮಾರ್ಗಗಳಿದ್ದು ಪ್ರಸ್ತುತ ಸುರಕ್ಷತಾ ದೃಷ್ಟಿಯಿಂದ ಗುಹೆಯೊಳಗೆ ಪ್ರವೇಶವನ್ನು ನಿಷೇಧಿಸಲಾಗಿದೆ.

ಪಾಂಡವರೊಡನೆ ಮಾತೆ ಕುಂತಿಯು ವಿಶ್ರಮಿಸುತ್ತಿದ್ದ ಅರಳಿಕಟ್ಟೆಯ ಬಳಿ ಇರುವ ಬೃಹತ್ ಬಂಡೆಯ ಆವರಣ ಈಗ ಮನೆಗಳಿಂದ ಆವೃತವಾಗಿದೆ.ಶ್ರೀ ಕೃಷ್ಣನ್ನು ತೂಗುತ್ತಿದ್ದ ತೊಟ್ಟಿಲ ಆಕೃತಿಯನ್ನು ಹೊಂದಿರುವ ತೊಟ್ಟಿಲು ಬಂಡೆಯನ್ನು ಸಹಾ ಇಲ್ಲಿ ಕಾಣಬಹುದು.ಗಿರಿಯ ಮೇಲಿಂದ ಸುತ್ತಮುತ್ತಲ ಪರಿಸರ್ಡ್ ವಿಹಂಗಮ ನೋಟವನ್ನು ಸವಿಯಬಹುದು. ಹೆಬ್ಬಾಳದ ಫ್ಲೈ ಓವರ್, ಕೆರೆಯಂಗಳ ರಾತ್ರಿಯ ವೇಳೆಯಲ್ಲಿ ಜಗಮಗಿಸುವ ಹೆಬ್ಬಾಳದ ಸುತ್ತಮುತ್ತಣದ ಬಡಾವಣೆಗಳು ಎಲ್ಲವೂ ಆಪ್ತವೆನಿಸುತ್ತದೆ.

ಪ್ರತಿನಿತ್ಯ ಬೆಳಿಗ್ಗೆ 7 ರಿಂದ 11 .30 ಹಾಗು ಸಂಜೆ 5.30 ರಿಂದ 7.30 ರವರೆಗೂ ಭಕಟ್ಟದಿಗಳ ದರ್ಶನಕ್ಕೆ ದೇಗುಲವು ತೆಗೆದಿರುತ್ತದೆ. ಪ್ರತಿ ಶಿವರಾತ್ರಿಯಂದು ವಿಶೇಷ ಪೂಜೆ ಹವನಗಳಿದ್ದು ಸುಮಾರು 50 ರಿಂದ 60 ಸಾವಿರ ಭಕ್ತರು ಪರಶಿವನ ದರ್ಶನ ಪಡೆಯುತ್ತಾರೆ. ಮರುದಿನ ಸುಮಾರು ಹತ್ತು ಸಾವಿರ ಆಸ್ತಿಕರಿಗೆ ಅಣ್ಣ ಸಂತರ್ಪಣೆ ಕೈಂಕರ್ಯವಿರುತ್ತದೆ. ಪ್ರತಿ ಪ್ರದೋಷ ಪೂಜೆ, ಸಂಕಷ್ಟಹರ ಚತುರ್ಥಿ, ಶ್ರೀ ಸತ್ಯನಾರಾಯಣಸ್ವಾಮಿಪೂಜೆ, ಅಮಾವಾಸ್ಯೆ ಪೂಜೆ, ನವರಾತ್ರಿಯ ವಿಶೇಷ ಪೂಜಾಲಂಕಾರ, ಕಾರ್ತಿಕ ಸೋಮವಾರದಂದು ಲಕ್ಷದೀಪೋತ್ಸವ ಹೀಗೆ ಹತ್ತು ಹಲವು ಪೂಜಾ ಕೈಂಕರ್ಯಗಳು ಇಲ್ಲಿ ಅತ್ಯಂತ ವಿಜೃಂಭಣೆಯಿಂದ ಜರಗುತ್ತದೆ.

ದಿನನಿತ್ಯದ ಒತ್ತಡದಿಂದ, ಅದೇ ರೂಟೀನ್ ಇಂದ ಬೋರ್ ಆಗಿ ಸ್ವಲ್ಪ ಚೇಂಜ್ ಬೇಕೆನಿಸಿದ್ರೆ ಈ ಜಾಗಕ್ಕೆ ಭೇಟಿ ನೀಡಿ..

Amazon Big Indian Festival
Amazon Big Indian Festival

Copyright © 2016 TheNewsism

To Top